ಕಾವೇರಿ ಪೊಂಪಟ್ಟಿನಂ

 ತಮಿಳುನಾಡಿನ ಪೂರ್ವ ತೀರದಲ್ಲಿ ಕಾವೇರಿ ನದಿ ಸಮುದ್ರವನ್ನು ಸೇರುವೆಡೆಯಲ್ಲಿರುವ ಒಂದು ಹಳ್ಳಿ. ಚೋಳರ ಆಳ್ವಿಕೆಯ ಮೊದಲ ಕಾಲದಲ್ಲಿ ಇದೊಂದು ಮುಖ್ಯ ರೇವುಪಟ್ಟಣವಾಗಿತ್ತೆಂದು ತತ್ಕಾಲೀನ ಮತ್ತು ಈಚೆಗಿನ ಸಾಹಿತ್ಯದಿಂದಲೂ ವಿದೇಶೀಯರ ಬರೆವಣಿಗೆಗಳಿಂದಲೂ ತಿಳಿದುಬಂದಿದೆ. ಈ ಸ್ಥಳದಲ್ಲಿ ಗತಕಾಲದ ಅನೇಕ ದೇವಾಲಯಗಳೂ ಇನ್ನಿತರ ಅವಶೇಷಗಳೂ ಕಾಣಬರುತ್ತವೆ. ಇಲ್ಲಿ ಕ್ರಿಸ್ತಶಕದ ಆರಂಭಕಾಲಕ್ಕೆ ಸೇರಿದ ನಾಣ್ಯಗಳು ಮತ್ತು ಮಡಕೆ ಚೂರುಗಳು ದೊರಕಿದುದರಿಂದ ಪುರಾತತ್ವಜ್ಞರು ಭೂಶೋಧನೆ ನಡೆಸಿದರು. ದೋಣಿಗಳಲ್ಲಿ ಸರಕುಗಳನ್ನು ತುಂಬುವ ಮತ್ತು ಅವುಗಳಿಂದ ಇಳಿಸುವ ಸಲುವಾಗಿ ಕ್ರಿ.ಪೂ. 3ನೆಯ ಶತಮಾನದ ಒಂದು ಬಂದರು ಕಟ್ಟೆ, ಕಾವೇರಿ ನದಿಯಿಂದ ನೀರನ್ನು ಸಂಗ್ರಹಿಸಲು ಸುಟ್ಟ ಇಟ್ಟಿಗೆಗಳಿಂದ ಕಟ್ಟಿದ ಕೊಳ, ಬೌದ್ಧವಿಹಾರವೊಂದರಲ್ಲಿ 8' ಚದರದ ವರ್ಣಚಿತ್ರಗಳನ್ನುಳ್ಳ ಏಳು ಕೋಣೆಗಳ ಒಂದು ಭಾಗ, ಸುಟ್ಟ ಮಣ್ಣಿನ ಮತ್ತು ಸುಣ್ಣದ ಶಿಲ್ಪಗಳಿಂದ ಅಲಂಕೃತವಾದ ಕಂಚಿನ ಧ್ಯಾನಿ ಬುದ್ಧವಿಗ್ರ್ರಹ, ಬುದ್ಧಪದವಿರುವ ಶಿಲೆ-ಇವು ಇಲ್ಲಿ ಸಿಕ್ಕಿರುವ ಇತರ ಮುಖ್ಯ ಅವಶೇಷಗಳು.

 (ಬಿ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ